ಕತ್ತೆಕಾಲಂಬು : ಆಸ್ಕ್ಲಿಪಿಯಡೇಸೀ (ಎಕ್ಕದ ಗಿಡದ ಕುಟುಂಬ) ಕುಟುಂಬಕ್ಕೆ ಸೇರಿದ ಟೈಲೋಘೋರ ಎಂಬ ಸಸ್ಯಜಾತಿ. ಇದು ತೆಳು ಹಾಗೂ ಸುತ್ತು ಬಳ್ಳಿಯಾಗಿ ದೀರ್ಘಕಾಲ ಬೆಳೆಯುವ ಒಂದು ಮೂಲಿಕೆ ಅಥವಾ ಚಿಕ್ಕಕಂಟಿ. ಇದರಲ್ಲಿ ಹಲವಾರು ಪ್ರಭೇದಗಳಿವೆ. ಅವುಗಳಲ್ಲಿ ಟೈ. ಫ್ಯಾಸಿಕ್ಯುಲೇಟ, ಟೈ ರೊಟಂಡಿಫೋಲಿಯ ಮತ್ತು ಟೈ. ಅಸ್ತಮ್ಯಾಟಿಕ ಪ್ರಭೇದಗಳು ಮುಖ್ಯವಾದವು. ಭಾರತದಲ್ಲಿ ಎಲ್ಲ ಕಡೆಗಳಲ್ಲಿಯೂ ಬಂಜರು ಪ್ರದೇಶಗಳಲ್ಲಿ ಕಲ್ಲುಬಂಡೆಗಳ ನಡುವೆ ಬೆಳೆಯುತ್ತದೆ. ಈ ಗಿಡಕ್ಕೆ ಅನೇಕ ಬೇರುಗಳಿವೆ. ಅವು ದಪ್ಪನಾಗಿ ರಸಭರಿತವಾಗಿವೆ. ಕಾಂಡ ನೀಳ, ನುಣುಪು ಅಥವಾ ರೋಮಮಯ. ಎಲೆಗಳು ಸ್ವಲ್ಪ ಹೆಚ್ಚುಕಡಿಮೆ ಅಭಿಮುಖವಾಗಿ ಜೋಡಣೆಗೊಂಡಿವೆ. ಎಲೆಗಳು ಸು. 1.2 ಮೀ ಉದ್ದ ಸು. 1.6 ಮೀ ಅಗಲ ಇವೆ. ಅವುಗಳ ತಳಭಾಗ ರೋಮಮಯ. ಆಕಾರ ಕತ್ತಿಯಂತೆ ಅಥವಾ ಅಂಡಾಕಾರ. ತುದಿ ಚೂಪು. ಎಲೆಗಳ ಬುಡದಲ್ಲಿ ಸು. 1" ಉದ್ದದ ವೃಂತಪರ್ಣಗಳಿವೆ. ಹೂಗಳು ಸರಳ ರಸೀಮ್ ಮಾದರಿಯ ಅಥವಾ ಛತ್ರಿಯಾಕಾರದ ಕವಲೊಡೆದ ಸೈಮೋಸ್ ಹೂಗೊಂಚಲುಗಳಲ್ಲಿರುತ್ತವೆ. ಹೂಗಳು ಗಾತ್ರದಲ್ಲಿ ಚಿಕ್ಕವು ಮತ್ತು ಆರೀಯ ಸಮಾಂಗತೆಯುಳ್ಳವು. ಅವುಗಳ ಬಣ್ಣ ಹಳದಿಮಿಶ್ರಿತ ಕೆಂಪು. ಪುಷ್ಪಪಾತ್ರೆ ಅಂಡಾಕಾರದ ಐದು ವಿಭಾಗಗಳನ್ನೊಳಗೊಂಡಿದೆ. ಗಂಟೆಯಾಕಾರದ ಪುಷ್ಟದಳಸಮೂಹ 5 ಭಾಗಗಳಾಗಿ ವಿಭಾಗವಾಗಿದೆ. ಕೇಸರಗಳು ಐದು. ಒಂದರೊಡನೊಂದು ಕೂಡಿವೆ. ಕೇಸರಗಳಿಗೂ ದಳಗಳಿಗೂ ಮಧ್ಯೆ ದಳಗಳಿಂದ ಹೊರಟ ಮುಕುಟವಿದೆ. ಪರಾಗಕೋಶ ಚಿಕ್ಕವು ಮತ್ತು ಹೂವಿನ ಕೇಂದ್ರ ಭಾಗದೆಡೆ ಬಾಗಿವೆ. ಒಂದೊಂದು ಪರಾಗಕೋಶದಲ್ಲಿಯೂ ಒಂದೊಂದೇ ಪರಾಗರಾಶಿಯಿದೆ. ಅಂಡಾಶಯದಲ್ಲಿ ಎರಡು ಕಾರ್ಪೆಲುಗಳಿವೆ. ಕಾರ್ಪೆಲುಗಳು ಶಲಾಕೆ ಮತ್ತು ಶಲಾಕಾಗ್ರದ ಭಾಗದಲ್ಲಿ ಮಾತ್ರ ಕೂಡಿಕೊಂಡಿದ್ದು ಅವುಗಳ ಬುಡ ಬಿಡಿಯಾಗಿದೆ. ಶಲಾಕಾಗ್ರ 5 ಮೂಲೆಗಳ ಬಿಲ್ಲೆಯಂತಿದೆ. ಫಲ ಎರಡು ಫಾಲಿಕಲ್ಗಳ ಜೋಡಿ. ಕೆಲವೊಮ್ಮೆ ಒಂದರ ಬೆಳೆವಣಿಗೆ ಕುಂಠಿತಗೊಂಡು ಒಂದೇ ಫಲವಾಗುವುದೂ ಉಂಟು. ಫಲದ ತುದಿ ಚೂಪು, ಮೈ ನುಣುಪು. ಬೀಜಗಳು ಅನೇಕ, ಅವುಗಳಿಗೆ ಪ್ರಸರಣಕಾರ್ಯದಲ್ಲಿ ಸಹಕಾರಿಯಾಗುವ ಕೂದಲುಗಳಿವೆ.

ಔಷಧೀಯವಾಗಿ ಈ ಸಸ್ಯ ಪ್ರಾಮುಖ್ಯವಾಗಿದೆ. ಇದರ ಬೇರಿನ ರಸವನ್ನು ಹಾಲಿನೊಡನೆ ಕೂಡಿಸಿ ಶಕ್ತಿ ವರ್ಧಕವಾಗಿ ಬಳಸುವುದುಂಟು. ಎಲೆಗಳನ್ನು ಅರೆದು ವ್ರಣ, ಗಾಯಗಳಿಗೆ ಹಚ್ಚುತ್ತಾರೆ. ಗಿಡವನ್ನು ಇಲಿ, ಜಂತುಗಳಿಗೆ ವಿಷಕಾರಿಯಾಗಿ ಬಳಸಲಾಗುತ್ತದೆ. ಇದನ್ನು ದೇಶೀ ಇಪಿಕ್ಯಾಕುವಾನ ಎಂತಲೂ ಕರೆಯಲಾಗುವುದಲ್ಲದೆ ಅದರ ಔಷಧೀಯ ಉಪಯುಕ್ತತೆಗಳೆಲ್ಲ ಇದಕ್ಕೂ ಇವೆ. ಇದರಲ್ಲಿ ಟೈಲೊಫೋರಿನ್ ಮತ್ತು ಟೈಲೋರಿಫೋರಿನಿನ್ ಎಂಬ 2 ಬಗೆಯ ಕ್ಷಾರಗಳುಂಟು. ಈ ಬಳ್ಳಿಯ ಎಲೆ ಮತ್ತು ಬೇರು ಒಳ್ಳೆಯ ವಾಂತಿಕಾರಕ ಔಷಧವೆಂದು ಪರಿಗಣಿಸಲಾಗಿದೆ. ಒಳಗಿನ ಕಫವನ್ನು ಹೊರಗೆ ಹಾಕಬಲ್ಲುದು. ಹೆಚ್ಚು ಬೆವರು ಬರುವ ಹಾಗೆಯೂ ಮಾಡಬಲ್ಲದು. ಅಲ್ಪಪ್ರಮಾಣದಲ್ಲಿ ಉದರವಾಯವಿಗೆ ಪರಿಣಾಮಕಾರಿ. ಅತಿಸಾರ ಮತ್ತು ರಕ್ತಾತಿಸಾರಕ್ಕೆ ಆರಂಭದಲ್ಲಿ (ಜ್ವರವಿದ್ದರೂ) ಎಲೆಯ ಚೂರ್ಣವನ್ನು ಗೋಂದು (ಅಂಟು) ಮತ್ತು ಅಫೀಮಿನೊಡನೆ ಕೊಡುವುದುಂಟು. ಬೇರನ್ನು ಅರೆದು ತೆಗೆದುಕೊಂಡರೆ ಮಲಶುದ್ಧತೆಯಾಗುತ್ತದೆ. ದಿನಬಿಟ್ಟು ದಿನ ಬರುವ ಜ್ವರ ಅಥವಾ ಮಲೇರಿಯ ಜ್ವರ ಸಂಬಂಧದ ರಕ್ತಾತಿ ಸಾರಕ್ಕೆ ಎಲೆಗಳ ಚೂರ್ಣವನ್ನು ಕ್ವಿನೀನ್ (ಸಿಂಕೋನ) ಗಿಡದ ತೊಗಟೆಯ ಪುಡಿಯೊಡನೆ ಕೊಡುತ್ತಾರೆ. ಇದನ್ನು ವಿರೇಚಕವಾಗಿಯೂ ಸಿಡುಬುರೋಗಕ್ಕೂ ಆರ್ಸಿನಿಕ್ ಮತ್ತು ಸರ್ಪಗಳ ವಿಷಹಾರಿಯಾಗಿಯೂ ಬಳಸುವುದುಂಟು. ಇದರ ಬೇರನ್ನು ಸರಸಪರಿಲ್ಲ ಎಂಬ ಸಸ್ಯದ ಬೇರುಗಳಿಗೆ ಬದಲಾಗಿಯೂ ಬಳಸುವುದುಂಟು. ಅವು ಆಸ್ತಮಾ ಮತ್ತು ಶ್ವಾಸಕೋಶ ಸಂಬಂಧದ ರೋಗಗಳಿಗೆಲ್ಲ ಪರಿಣಾಮಕಾರಿ.                   	(ಎಂ.ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ